top of page

ವಿಧಾನಸೌಧಕ್ಕೆ ಶಾಶ್ವತ ದೀಪಾಲಂಕಾರ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

  • Writer: Bohith Surthy
    Bohith Surthy
  • Apr 6
  • 1 min read

ಬೆಂಗಳೂರು: ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಲೋಕಾರ್ಪಣೆಗೊಳಿಸಿದರು.

ಈ ಮುಂಚೆ ರಾಷ್ಟ್ರೀಯ ಹಬ್ಬ ಹಾಗೂ ವಿಶೇಷ ಸಂದರ್ಭಗಳಲ್ಲಿ ಮಾತ್ರ ವಿಧಾನಸೌಧಕ್ಕೆ ದೀಪಾಲಂಕಾರದ ವ್ಯವಸ್ಥೆ ಕಲ್ಪಿಸಲಾಗುತ್ತಿತ್ತು. ಇಂದಿನಿಂದ ಶಾಶ್ವತ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಶನಿವಾರ ಮತ್ತು ಭಾನುವಾರ ವರ್ಣರಂಜಿತ ವಿದ್ಯುತ್​​​​ ದೀಪಗಳಿಂದ ಶಕ್ತಿ ಕೇಂದ್ರ ಕಂಗೊಳಿಸಲಿದೆ.

ವಿಧಾನಸೌಧಕ್ಕೆ ಶಾಶ್ವತ ದೀಪಾಲಂಕಾರ ಉದ್ಘಾಟಿಸಿ ಮಾತನಾಡಿದ ಸಿಎಂ, ಸಂಸತ್ತು, ವಿಧಾನಸೌಧ ಜನರ ಮತ್ತು ರಾಜ್ಯದ ಹಾಗೂ ದೇಶದ ಸಮಸ್ಯೆಗಳನ್ನು ಚರ್ಚಿಸಿ, ಪರಿಹಾರ ಕಂಡುಕೊಳ್ಳುವ ದೇಗುಲಗಳು. ಸರ್ಕಾರದ ಕೆಲಸ ದೇವರ ಕೆಲಸ ಎನ್ನುವ ಮಾತನ್ನು ಪ್ರತಿಯೊಬ್ಬರೂ ಸಾರ್ಥಕಗೊಳಿಸುವ ರೀತಿಯಲ್ಲಿ ಕೆಲಸ ಮಾಡಿ ರಾಜ್ಯದ ಕಟ್ಟ ಕಡೆಯ ಮನುಷ್ಯನಿಗೂ ನ್ಯಾಯ, ನೆಮ್ಮದಿ ಕೊಡಿಸಬೇಕು ಎಂದರು.

ಸ್ವಾತಂತ್ರ್ಯ ಬಂದು, ಸಂವಿಧಾನ ರಚನೆಯಾಗಿ 75 ವರ್ಷಗಳಾದರೂ ಅಸಮಾನತೆಯನ್ನು ಇನ್ನೂ ತೆಗೆದುಹಾಕಲು ಸಾಧ್ಯವಾಗಿಲ್ಲ. ವಿಧಾನಸೌಧ, ಸುವರ್ಣಸೌಧ, ವಿಕಾಸಸೌಧದಲ್ಲಿ ಕುಳಿತು ಸಮ ಸಮಾಜ ತರುವ ದಿಕ್ಕಿನಲ್ಲಿ ಶ್ರಮಿಸಬೇಕು. ಕಾನೂನು ಸುವ್ಯವಸ್ಥೆ ಸುಗಮ ಆಗಿರಬೇಕಾದರೆ ಅಸಮಾನತೆ ಅಳಿಯಬೇಕು ಎಂದರು.

ಜನರ ಕೆಲಸ ಸರಿಯಾಗಿ ಮಾಡಲು ನಮ್ಮನ್ನು ವಿಧಾನಸೌಧಕ್ಕೆ ಕಳುಹಿಸಿದ್ದಾರೆ. ಈ ಉದ್ದೇಶಕ್ಕಾಗಿ ವಿಧಾನಸೌಧ ಕಟ್ಟಿಸಲಾಗಿದೆ. ಈ ಉದ್ದೇಶ ಈಡೇರಿಸಿ‌ ಜನರ ಸಮಸ್ಯೆ ಬಗೆಹರಿಸುವ ಶಕ್ತಿ ನಮಗೆ ಬರಲಿ, ರಾಜ್ಯದ ಜನತೆಗೂ ಆರ್ಥಿಕ ಶಕ್ತಿ ತರಲು ಯತ್ನಿಸೋಣ ಎಂದು ಸಿಎಂ ಹೇಳಿದರು.

ವಿಧಾನಸೌಧಕ್ಕೆ ಶಾಶ್ವತ ದೀಪಾಲಂಕಾರ ಅಳವಡಿಸಲು ಕಾಳಜಿ ವಹಿಸಿ ಕಾರ್ಯಗತ ಮಾಡಿದ ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

Comments


bottom of page